ಧೀಮತಿ ಮಹಿಳಾ ಸಮಾಜ, ಉಜಿರೆ  ಮಾಸಿಕ ಸಭೆಯ ವರದಿ

ಧೀಮತಿ ಮಹಿಳಾ ಸಮಾಜ, ಉಜಿರೆ  ಮಾಸಿಕ ಸಭೆಯ ವರದಿ

prayer thumb

ಧೀಮತಿ ಮಹಿಳಾ ಸಮಾಜ, ಉಜಿರೆ 

ಮಾಸಿಕ ಸಭೆಯ ವರದಿ ದಿನಾಂಕ:18-07-2026 

ಧೀಮತಿ ಮಹಿಳಾ ಸಮಾಜ, ಉಜಿರೆಯ ಮಾಸಿಕ ಸಭೆಯು ದಿನಾಂಕ 18-07-2026 ರಂದು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವು ಶ್ರೀಮತಿ ಮಧುರಾ ಸುಮನ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಉಪಾಧ್ಯಕ್ಷರಾದ ಶ್ರೀಮತಿ ಐಶ್ವರ್ಯ ರಾಣಿ ಅವರು ಸಭೆಗೆ ಆಗಮಿಸಿದ ವಿಶೇಷ ಅತಿಥಿಗಳು ಹಾಗೂ ಸದಸ್ಯೆಯರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಕಾರ್ಯದರ್ಶಿ ಶ್ರೀಮತಿ ಸ್ಮೃತಿ ವಿನಯಚಂದ್ರ ಅವರು ಕಳೆದ ಪದಗ್ರಹಣ ಸಮಾರಂಭದ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಬಳಿಕ ನಡೆದ ಧರ್ಮಾಮೃತ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯೆಯಾದ ಶ್ರೀಮತಿ ಸುಗುಣ ಎಸ್. ಶೆಟ್ಟಿ ಅವರು ಶ್ರುತ ಪಂಚಮಿಯ ಮಹತ್ವ, ಅದರ ಅರ್ಥ, ವಿವಿಧ ವಿಧಗಳು ಹಾಗೂ ಜೈನ ಧರ್ಮದಲ್ಲಿ ಅದರ ವಿಶೇಷ ಸ್ಥಾನಮಾನ ಕುರಿತು ಸ್ಪಷ್ಟ ಹಾಗೂ ಮಾಹಿತಿಪೂರ್ಣವಾಗಿ ವಿವರಿಸಿ ಸದಸ್ಯೆಯರಲ್ಲಿ ಧರ್ಮಜ್ಞಾನವನ್ನು ಹೆಚ್ಚಿಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಯೋಗ ಪ್ರಾತ್ಯಕ್ಷಿಕೆಯ ಕುರಿತು ಮುಖ್ಯ ಅತಿಥಿಗಳಾದ ಡಾ. ಅನನ್ಯಾ ಜೈನ್ ಅವರು ಮಾತನಾಡಿ, ನಾವು ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ, ಅದೇ ರೀತಿ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯದ ಕಾಳಜಿಯನ್ನೂ ವಹಿಸುವುದು ಅತ್ಯಂತ ಮುಖ್ಯವೆಂದು ತಿಳಿಸಿದರು. ಇಂದಿನ ಒತ್ತಡಭರಿತ ಜೀವನದಲ್ಲಿ ಯೋಗವು ಒತ್ತಡ ನಿರ್ವಹಣೆಗೆ ಅತ್ಯುತ್ತಮ ಸಾಧನವಾಗಿದ್ದು, ಉತ್ತಮ ನಿದ್ರೆಯ ಕ್ರಮ, ಜಾಗೃತ ಆಹಾರ ಪದ್ಧತಿ (Mindful Eating), ವಾರದಲ್ಲಿ ಒಂದು ದಿನ ಉಪವಾಸ , ಪ್ರಾಣಾಯಾಮ ಹಾಗೂ ನಿಯಮಿತ ಯೋಗಾಭ್ಯಾಸ ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಪ್ರವೀಣ ಕುಮಾರ್ ಇಂದ್ರ ಅವರು ಮಹಿಳೆಯರು ತಮ್ಮ ಕುಟುಂಬ, ವೃತ್ತಿ ಹಾಗೂ ತಮ್ಮ ಇತರ ಜವಾಬ್ದಾರಿಗಳ ನಡುವೆ ತಮ್ಮ ಆರೋಗ್ಯ ಮತ್ತು ಕ್ಷೇಮವನ್ನು ಕಡೆಗಣಿಸಬಾರದು.  ಪ್ರತಿಯೊಬ್ಬ ಮಹಿಳೆಯೂ ತನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ದೈಹಿಕ ಕ್ಷಮತೆಯ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು, ಕೋಪವನ್ನು ನಿಯಂತ್ರಿಸುವುದು ಹಾಗೂ ಮನಸ್ಸಿನ ಸಮತೋಲನವನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಬಳಿಕ ಮನರಂಜನಾ ಆಟವು ಎಲ್ಲ ಸದಸ್ಯೆಯರಲ್ಲಿ ಉಲ್ಲಾಸ ಮತ್ತು ಸಂತೋಷವನ್ನು ಮೂಡಿಸಿತು. ನಂತರ ಡಾ. ಅನನ್ಯಾ ಜೈನ್ ಅವರ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಸದಸ್ಯೆಯರು ಉತ್ಸಾಹದಿಂದ ಯೋಗಾಭ್ಯಾಸದಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.

ಉಪಾಧ್ಯಕ್ಷರಾದ ಶ್ರೀಮತಿ ಶಶಿಪ್ರಭ ಧನ್ಯ ಕುಮಾರ್ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯದರ್ಶಿ ಶ್ರೀಮತಿ ಸ್ಮೃತಿ ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಶಾಂತಿ ಮಂತ್ರದೊಂದಿಗೆ ಸಭೆಯು ಸಮಾಪ್ತಿಗೊಂಡಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಸದಸ್ಯೆಯರು ಹಾಗೂ ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.